ರಾಜಸ್ಥಾನದ ರತ್ನಾಕರ ಪಂಡಿತ ಎಂಬ ಕವಿ ಛತ್ರಪತಿ ಶಿವಾಜಿ ಬಗ್ಗೆ ಒಂದೇ ಒಂದು ಶಬ್ದ ಬರೆದಿದ್ದಾನೆ. ಅದು `ದಿಲ್ಲೀಂದ್ರಪದಿಲಪ್ಸವ.’ ಅಂದರೆ, ದೆಹಲಿಯಲ್ಲಿ ಸ್ವರಾಜ್ಯ ಸ್ಥಾಪನೆ ಮಾಡುವ ಮಹತ್ವಾಕಾಂಕ್ಷೆಯುಳ್ಳ ರಾಜ. ಅಗಸ್ತö್ಯ ಮುನಿಗಳು ಒಂದೇ ಆಚಮನದಲ್ಲಿ ಇಡೀ ಸಮುದ್ರವನ್ನು ಕುಡಿದರು ಎಂದು ಹೇಳಲಾಗುತ್ತದೆ. ಹಾಗೆಯೇ, ಪ್ರತಿಭಾನ್ವಿತ ಕವಿ ರತ್ನಾಕರ ಪಂಡಿತ ಒಂದೇ ಶಬ್ದದಲ್ಲಿ ಛತ್ರಪತಿ ಶಿವಾಜಿಯ ವ್ಯಕ್ತಿತ್ವವನ್ನೇ ಹಿಡಿದಿಟ್ಟಿದ್ದಾನೆ. ನಿಜವಾಗಿಯೂ ಶಿವ ಛತ್ರಪತಿಯ ಜೀವನ ಚರಿತ್ರೆಯಲ್ಲಿ ಮಹಾಕಾವ್ಯ, ಮಹಾಗಾಥೆ ಹಾಗೂ ಅಲೌಕಿಕ ಮಹಾಭಾರತವೇ ಒಂದೆಡೆ ಕಲೆತಂತಾಗಿದೆ. ದೇಶದಲ್ಲಿದ್ದ ಗುಲಾಮಿತನದ ಘನಘೋರ ಅಂಧಕಾರವನ್ನು ಹೊಡೆದೋಡಿಸಿ ಶಿವಾಜಿ ಮಹಾರಾಜನು ತೇಜೋಮಯವಾದ ಸಾರ್ವಭೌಮ ಸ್ವರಾಜ್ಯವನ್ನು ನಿರ್ಮಿಸಿದ. ಇದು ಎಂತಹ ರಾಷ್ಟçನಿರ್ಮಾತನ ಜೀವನ ಚರಿತ್ರೆಯೆಂದರೆ, ಅದನ್ನು ವ್ಯಕ್ತಪಡಿಸುವಲ್ಲಿ ಸಾಹಿತ್ಯದ ಎಲ್ಲ ಉಪಮೆಗಳು ಮತ್ತು ಅಲಂಕಾರಗಳೂ ಸಾಲದಾಗುತ್ತವೆ. ಅತಿ ಬಲಶಾಲಿಗಳಾದ ಎಂಟು ಸ್ವದೇಶಿ ಹಾಗೂ ವಿದೇಶಿ ರಾಜರೊಂದಿಗೆ ಯುದ್ಧ ಮಾಡಿ ಶಿವಾಜಿ ಒಂದು ಅಸಾಧಾರಣ ಸ್ವರಾಜ್ಯವನ್ನು ನಿರ್ಮಾಣ ಮಾಡಿದ. ಈ ಸ್ವರಾಜ್ಯ ಒಂದು ಉತ್ಕೃಷ್ಟ ದರ್ಜೆಯ ಸುರಾಜ್ಯವಾಗಿತ್ತು ಎಂಬುದು ಕೆಲ ಜನರ ಗಮನಕ್ಕೆ ಬರುವುದೇ ಇಲ್ಲ. ರಾಜಕೀಯದ ಪ್ರತಿಯೊಂದು ಆಯಾಮವನ್ನೂ ಸ್ವಾವಲಂಬಿ, ಆದರ್ಶ, ವಿನೂತನ ಹಾಗೂ ಅಜೇಯ ಮಾದರಿಯಲ್ಲಿ ಸಿದ್ಧಪಡಿಸಲು ಶಿವಾಜಿ ಪಟ್ಟ ಪರಿಶ್ರಮ ವಿಶ್ವಾಮಿತ್ರ ಋಷಿ ಹೊಸ ಸೃಷ್ಟಿಯ ನಿರ್ಮಾಣ ಮಾಡಲು ಪಟ್ಟ ಪರಿಶ್ರಮದಂತೆಯೇ ಇತ್ತು. ಒಂದು ಸಾರ್ವಭೌಮ ರಾಜ್ಯವನ್ನು ನಿರ್ವಹಣೆ ಮಾಡುವುದು ಯಾವುದಾದರೊಂದು ವಿಶಾಲ ಅವಿಭಿಕ್ತ ಕುಟುಂಬವನ್ನು ನಿರ್ವಹಣೆ ಮಾಡುವ ಯಜಮಾನನ ಕೆಲಸವಿದ್ದಂತೆ. ಶಿವಾಜಿ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿ ತೋರಿಸಿದ. ಈ ಅಸಾಧಾರಣವಾದ, ಸುಂದರ ಸ್ವರಾಜ್ಯವನ್ನು ಅವನು ಸುರಾಜ್ಯ ಮಾಡಿದ್ದು ಹೇಗೆ ಎಂಬುದನ್ನು ಅನಿಲ ಮಾಧವ ದವೆ ಈ ಕೃತಿಯಲ್ಲಿ ಸಾಕಷ್ಟು ಶೋಧಿಸಿ ವಿಸ್ತಾರವಾಗಿ ವಿವರಿಸಿದ್ದಾರೆ.
ಈ ಪುಸ್ತಕದ ಪರಿವಿಡಿ ಓದಿದರೂ ಸಾಕು, ಓದುಗರಿಗೆ ಸ್ವರಾಜ್ಯದ ರಾಜನೀತಿಯ ಅಗಾಧತೆ ಎಷ್ಟು ಎಂಬುದರ ಚಿತ್ರಣ ಸಿಗುತ್ತದೆ. ಇದರ ಒಂದೊAದು ಅಧ್ಯಾಯಗಳೂ ರಾಜ್ಯದ ಒಂದೊAದು ಅಂಗವಿದ್ದAತೆ. ಶಿವಾಜಿ ಮಹಾರಾಜನ ಆಡಳಿತ ವ್ಯವಸ್ಥೆ, ದಕ್ಷತೆ, ಅಖಂಡ ಸಾರ್ಥಕತೆ ಹಾಗೂ ಗುಣಸಂಪನ್ನತೆಯನ್ನು ಲೇಖಕರು ಬಹಳ ಪ್ರಭಾವಿ ಶಬ್ದಗಳಲ್ಲಿ ವರ್ಣಿಸಿದ್ದಾರೆ. ಚಾಣಕ್ಯ ಹಾಗೂ ಅವನಿಗಿಂತ ಹಲವು ಪಟ್ಟು ಹೆಚ್ಚು ಬುದ್ಧಿಶಾಲಿಯಾದ ಭಗವಾನ್ ಶ್ರೀಕೃಷ್ಣನೇ ಸ್ವತಃ ಹೇಳಿದ ಶಿವಗಾಥೆಯಂತೆ ಈ ಕೃತಿ ಭಾಸವಾಗುತ್ತದೆ. ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಇಲ್ಲಿನ ರಾಜಕಾರಣಿಗಳಿಗೆ ನಿಜಕ್ಕೂ ಭಾರತದ ಸ್ವರಾಜ್ಯ ಒಂದು ಸುರಾಜ್ಯವಾಗಿ ಬದಲಾವಣೆಯಾಗಬೇಕು ಎಂಬ ಬಯಕೆ ಇರುವುದೇ ಹೌದಾದರೆ ಅವರೆಲ್ಲರೂ ಈ ಕೃತಿಯನ್ನು ಖಂಡಿತ ಓದಬೇಕು. ಇದರಲ್ಲಿರುವ ಒಂದಷ್ಟು ಅಂಶಗಳಾದರೂ ನಮ್ಮ ಅರಿವಿಗೆ ಬಂದರೆ ಆಗ ದೇಶದ ಚಿತ್ರಣವೇ ಬದಲಾಗುತ್ತದೆ. ಇಂದಿನ ಭಾರತ ಕೇವಲ ಉದ್ಯಮಿಗಳ ಆಟದ ಮೈದಾನದಂತಾಗಿದೆ. ಇದು ಕಹಿಯಾದರೂ ಸತ್ಯ. ಶಿವಾಜಿಯ ರಾಜನೀತಿ ಹಾಗೂ ರಾಜ್ಯನೀತಿಗಳು ಅಮೃತ ಮತ್ತು ಸಂಜೀವಿನಿಯಿದ್ದAತೆ. ಅವನ ಆಡಳಿತ ವ್ಯವಸ್ಥೆ ಈಗಾಗಲೇ ಪ್ರಯೋಗಿಸಿ ಯಶಸ್ವಿಯಾದ ಒಂದು ಅದ್ಭುತ ವ್ಯವಸ್ಥೆ. ಅನಿಲ ದವೆಯವರು ಈ ಕೃತಿಯಲ್ಲಿ ನಮಗೆ ಅವೆಲ್ಲವನ್ನೂ ಪರಿಚಯ ಮಾಡಿಸುತ್ತಾರೆ. ಭಾರತದ ಪ್ರತಿಯೊಬ್ಬ ಸಂಸದರು ಹಾಗೂ ವಿಧಾನಸಭೆಯ ಶಾಸಕರು ಈ ಪುಸ್ತಕವನ್ನು ಅವಶ್ಯವಾಗಿ ಅಧ್ಯಯನ ಮಾಡಬೇಕು. ಇದಕ್ಕಿಂತ ಹೆಚ್ಚೇನು ಹೇಳಲಿ?