samrudhasahitya

Book Details

ಸನಾತನ

Pages: 160
Price: 160

ಸನಾತನ ಧರ್ಮದ ವಿರುದ್ಧ ಪ್ರತಿನಿತ್ಯವೆಂಬAತೆ ವಿವಿಧ ಸ್ತರಗಳಲ್ಲಿ ಟೀಕೆ, ದಾಳಿ ನಡೆಯುತ್ತಲೇ ಇರುತ್ತದೆ. ಅದು ಈಗ ಮಾತ್ರ ಅಲ್ಲ, ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ಅವ್ಯಾಹತ ವಿದ್ಯಮಾನ. ಮುಂದೆಯೂ ಇಂತಹ ಟೀಕೆ,ವಿಮರ್ಶೆ,ದಾಳಿಗಳಾಗುವುದರಲ್ಲಿ ಅನುಮಾನವಿಲ್ಲ. ಸನಾತನ ಧರ್ಮ ಇಂತಹ ಹಲವು ಅಗ್ನಿಪರೀಕ್ಷೆಗಳಿಗೆ ತನ್ನನ್ನು ಒಡ್ಡಿಕೊಂಡೇ ಕಾಲದ ಪ್ರವಾಹದಲ್ಲಿ ಪುಟಕ್ಕಿಟ್ಟ ಚಿನ್ನದಂತೆ ಮಿನುಗಿದೆ. ಚಿರಪುರಾತನ ಹಾಗೂ ನಿತ್ಯನೂತನವಾಗಿ ಕಂಗೊಳಿಸುತ್ತ, ಜಗದಗಲ ಬೆಳಕು ಬೀರುತ್ತಲೇ ಇದೆ.ಅದೇ ಸನಾತನ ಧರ್ಮದ ತಾಕತ್ತು. ಅದೇ ಸನಾತನದ ಮಹಿಮೆ.

ಅದಕ್ಕೆ ಕಾರಣವೂ ಇದೆ.ಸನಾತನ ಧರ್ಮ ಅಥವಾ ಹಿಂದೂ ಧರ್ಮ ಎಂಬುದು ಒಂದು ಸಹಜ ಸ್ವಾಭಾವಿಕ ಧರ್ಮ. ಒಬ್ಬನೇ ದೇವರನ್ನು ಪೂಜಿಸು.ಒಂದೇ ರೀತಿ ಉಡುಪು ಧರಿಸು. ಒಂದೇ ಬಗೆಯ ಸಂಪ್ರದಾಯ ಪಾಲಿಸು. ಒಂದೇ ತೆರನ ಮನೋಭಾವ ರೂಢಿಸಿಕೊ. ಇತರ ದೇವರನ್ನು ಪೂಜಿಸುವವರಿಗೆ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲ. ಇತ್ಯಾದಿ ಸಂಕುಚಿತ ದೃಷ್ಟಿಕೋನವನ್ನು ಅದು ಎಂದಿಗೂ ಬಿತ್ತಿದ್ದಿಲ್ಲ. ಯಾವ ದೇವರನ್ನಾದರೂ ಪೂಜಿಸು ಅಥವಾ ಪೂಜಿಸದಿದ್ದರೂ ಅಭ್ಯಂತರವಿಲ್ಲ. ಯಾವ ಉಡುಪನ್ನಾದರೂ ಧರಿಸು.ಯಾವ ಸಂಪ್ರದಾಯ ಬೇಕಾದರೂ ಪಾಲಿಸು. ಜಗತ್ತಿನೆಲ್ಲೆಡೆಯಿಂದ ಜ್ಞಾನ ಹರಿದುಬರಲಿ ಎಂದು ಬೋಧಿಸುವ ಸನಾತನ ಧರ್ಮ ಸಂಕುಚಿತ,ಹೀನವಾಗುವುದು ಹೇಗೆ ಸಾಧ್ಯ?

ಸನಾತನ ಧರ್ಮವೇ ನಿಜವಾದ ಮಾನವ ಧರ್ಮ ಎಂದು ಹಲವು ಮಹನೀಯರು ಕಾಲಕಾಲಕ್ಕೆ ಸಾರುತ್ತಲೇ ಬಂದಿದ್ದಾರೆ. ಪೌರ್ವಾತ್ಯರಷ್ಟೇ ಅಲ್ಲದೆ ಪಾಶ್ಚ್ಯಾತ್ಯರೂ ಈ ಧರ್ಮದ ಬೋಧನೆ, ಸಂದೇಶಗಳಿಗೆ ಮಾರುಹೋಗಿದ್ದಾರೆ. ಸನಾತನ ಧರ್ಮ ಸಮಾನತೆ, ಏಕತೆ, ಮಾನವಿಯತೆಗಳಿಗೆ ಪೂರಕವಾಗಿಯೇ ಇದೆ. ಮರವೊಂದರಲ್ಲಿರುವ ಬೇರು, ಕಾಂಡ, ಕೊಂಬೆ, ರೆಂಬೆ, ಎಲೆಗಳು, ಹೂವು-ಹಣ್ಣು ಪ್ರತಿಯೊಂದೂ ಭಿನ್ನ ಸ್ವರೂಪದವು. ಕಾಂಡವು ರೆಂಬೆಗಳಿAದ ಭಿನ್ನ.ರೆಂಬೆಗಳು ಎಲೆಗಳಿಂದ ಭಿನ್ನ. ಒಂದು ಎಲೆ ಇದ್ದಂತೆ ಇನ್ನೊಂದು ಎಲೆ ಇರುವುದಿಲ್ಲ. ಒಂದೇ ಗಾತ್ರದ, ಒಂದೇ ರೀತಿಯ ಹಣ್ಣುಗಳಿರುವುದು ಅಸಾಧ್ಯ. ಆದರೆ ಈ ಹೊರತೋರಿಕೆಯ ಭಿನ್ನತೆಗಳೆಲ್ಲ ಒಂದೇ ಮರದ ಬಹುಮುಖ ಆವಿಷ್ಕಾರಗಳು. ಅವುಗಳಲ್ಲಿ ಹರಿಯುವ ಜೀವರಸ ಎಲ್ಲಾ ಭಾಗಗಳನ್ನು ಪೋಷಿಸುತ್ತದೆ. ಸಾವಿರಾರು ವರ್ಷಗಳಿಂದ ವಿಕಸಿತಗೊಂಡು ಬಂದಿರುವ ನಮ್ಮ ಸಾಮಾಜಿಕ ಜೀವನದ ಭಿನ್ನತೆಗಳೂ ಇದೇ ರೀತಿಯದು. ಮರದಲ್ಲಿನ ಒಂದು ಹೂವು ಅಥವಾ ಎಲೆ ಘರ್ಷಣೆ ಮತ್ತು ಒಡಕಿಗೆ ಹೇಗೆ ಕಾರಣ ಅಲ್ಲವೋ ಹಾಗೆಯೇ ನಮ್ಮ ಸಾಮಾಜಿಕ ಭಿನ್ನತೆಗಳೂ. ಇಂತಹ ಸಹಜ ವಿಕಸನವು ನಮ್ಮ ಸಾಮಾಜಿಕ ಜೀವನದ ಒಂದು ಅಪೂರ್ವ ಲಕ್ಷಣ. ಹಾಗಾಗಿಯೇ ಸನಾತನ ಧರ್ಮ ಸಾರುವುದು ಮಾತ್ರ ಮಾನವತೆಯನ್ನೇ. ಹಾಗಾಗಿಯೇ ಅದು ನಿಜವಾದ ಮಾನವ ಧರ್ಮ ಎನಿಸಿಕೊಂಡಿದೆ.